ಅಡ್ಡಗೋಡೆ

ಗೃಹ, ಸೌಧ, ಕಚೇರಿಗಳು, ಕಾರ್ಯಾಲಯಗಳು ಇವುಗಳಲ್ಲಿ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಯನ್ನು ಬೇರ್ಪಡಿಸಲು ಕಟ್ಟುವ ಗೋಡೆ. ಅಡ್ಡಗೋಡೆಗಳನ್ನು ಕಟ್ಟಡದ ಅಂಗಳದಿಂದ ಊಟದ ಕೊಠಡಿ, ಶಯನ ಗೃಹದಿಂದ ಶೌಚಾಗೃಹ, ಅಡಿಗೆಯ ಕೊಠಡಿಯಿಂದ ಉಗ್ರಾಣದ ಕೊಠಡಿ, ಇವುಗಳ ನಡುವೆ ಕಟ್ಟುತ್ತಾರೆ. ದೊಡ್ಡ ಸೌಧಗಳಲ್ಲಿ ಇಂಥ ಗೋಡೆಗಳನ್ನು ಅಗತ್ಯವಾದ ಸ್ಥಳಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಕಟ್ಟುತ್ತಾರೆ. ಇದರ ಎತ್ತರ ಸಾಮಾನ್ಯವಾಗಿ ನೆಲದಿಂದ ಮೇಲ್ಛಾವಣಿಯವರೆಗೂ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಎತ್ತರವನ್ನು 120 ರಿಂದ 200 ಸೆಂ.ಮೀ.ಗಳಿಗೆ ನಿಲ್ಲಿಸಿರುತ್ತಾರೆ. ಇಂಥ ಗೋಡೆಯನ್ನು ಮೋಟು ಗೋಡೆ ಎನ್ನಬಹುದು. ಈ ಗೋಡೆಗಳು ಮೇಲ್ಛಾವಣಿಯ ಭಾರ ಅಥವಾ ಅಕ್ಕಪಕ್ಕದ ಭಾರಗಳನ್ನು ತಡೆಯಲಾರವು. ಆದ್ದರಿಂದ ತಳಪಾಯವಿಲ್ಲದೆ ನೆಲದ ಮಟ್ಟದಿಂದ ಕೂಡ ಇವನ್ನು ಕಟ್ಟಬಹುದು. ಅಡ್ಡಗೋಡೆಯ ದಪ್ಪ  ಇಟ್ಟಿಗೆ, ಅಂದರೆ  ಅಥವಾ 10 ಸೆಂ. ಮೀ.ಗಳು; ಪ್ರಬಲಿತ ಕಾಂಕ್ರೀಟ್‍ನಲ್ಲಿ ಕಟ್ಟಿದರೆ ದಪ್ಪವನ್ನು 6.5 ಸೆಂ.ಮೀ.ಗೆ ಇಳಿಸಬಹುದು. ಅಡ್ಡಗೋಡೆಗಳಲ್ಲಿ ಬಾಗಿಲುಗಳನ್ನೂ ಇರಿಸಬಹುದು. 
	
ಇಟ್ಟಿಗೆಯಿಂದ ಕಟ್ಟುವ ಅಡ್ಡಗೋಡೆಗಳಿಗೆ ಸಿಮೆಂಟು ಗಾರೆಯನ್ನು ಉಪಯೋಗಿಸಬೇಕು. ಗೋಡೆ ಭದ್ರವಾಗಿರಲು ಪ್ರತಿ 90 ಸೆಂ.ಮೀ. ಎತ್ತರದಲ್ಲಿ 6 ಮಿ.ಮೀ. ದುಂಡು ಕಂಬಿಯನ್ನು ಇಟ್ಟು 7.5 ಸೆಂ.ಮೀ. ದಪ್ಪದ ಕಾಂಕ್ರೀಟ್ ಹಾಕುತ್ತಾರೆ. ಅನಂತರ ಗೋಡೆಯ ಎರಡೂ ಪಕ್ಕಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳಿಂದ ಗಿಲಾವ್ ಮಾಡುತ್ತಾರೆ. ಕಾಂಕ್ರೀಟ್‍ನಲ್ಲಿ ಅಡ್ಡಗೋಡೆ ಕಟ್ಟಿದಾಗ 3 ನೂಲು ದಪ್ಪದ ಕಂಬಿಯನ್ನು ಎತ್ತರದಲ್ಲೂ 1 ನೂಲು ದಪ್ಪದ ಕಂಬಿಯನ್ನು ಅಡ್ಡದಲ್ಲೂ ಪ್ರತಿ ಕಂಬಿಗಳೂ 15 ಸೆಂ.ಮೀ. ದೂರ ಇರುವಂತೆ ಎಳೆದು ನೆಲದ ಮೇಲೆ ನಿಲ್ಲಿಸಿ ಕಾಂಕ್ರೀಟ್ ಹಾಕುತ್ತಾರೆ. ಅನಂತರ ಸಿಮೆಂಟ್ ಗಿಲಾವ್ ಮಾಡಿ. 21 ದಿನಗಳ ಕಾಲ ಗೋಡೆಯನ್ನು ಒದ್ದೆಯಾಗಿ ಇಟ್ಟಿರುತ್ತಾರೆ. 
	
ಮರದ ಹಲಗೆಗಳು ಮತ್ತು ಗಾಜುಗಳನ್ನು ಉಪಯೋಗಿಸಿ ಅಡ್ಡಗೋಡೆಗಳನ್ನು ತಯಾರಿಸಬಹುದು. ಮರದ ಹಲಗೆಯ ಮೇಲೆ ಅಂದ ಚೆಂದದ ಕೆತ್ತನೆಯ ಕೆಲಗಳನ್ನು ಮಾಡಿಸಿರುತ್ತಾರೆ. ಇಂಥ ಅಡ್ಡಗೋಡೆಗಳು ಬೇಕಾದಾಗ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಲು ಯೋಗ್ಯವಾದುವುಗಳು.			
(ಜಿ.ಟಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ